Thursday 4 November, 2010

ದೀಪ

ಹಚ್ಚುವ ಪ್ರತಿ ದೀಪವು
      ಬೆಳಗಲಿ ಬದುಕನ್ನು
ಬೆಳಕಿನ ಪ್ರತಿ ಕಣವು
      ಹೊಡೆದೋಡಿಸಲಿ ಅಂಧಕಾರವನ್ನು

ಜ್ಯೋತಿಯ ಪ್ರಖರತೆ ಮೂಡಿಸಲಿ
      ಒಳಿತಿನ ನಂಬುಗೆಯನ್ನು
ಕುಡಿಯ ನಿಶ್ಚಲತೆ ತುಂಬಲಿ
       ದೃಡ ಆತ್ಮವಿಶ್ವಾಸವನ್ನು

ಆರತಿಯ ಸಂಭ್ರಮವು ಹರಡಲಿ
       ಪ್ರೀತಿ ವಿಶ್ವಾಸವನ್ನು
ನಂದಾದೀಪವು ಶಾಶ್ವತಗೊಳಿಸಲಿ
      ಬದುಕಿನ ಭವ್ಯತೆಯನ್ನು

Thursday 26 August, 2010

ನಿರೀಕ್ಷೆ

ಈ ಸಣ್ಣ ಘಳಿಗೇಲಿ ನಾ ಕಂಡ ಕನಸಲ್ಲಿ ಅರಳಿದ್ದು ನಿನ್ನಾನಗೆಯೇ 
ಈ ಸಿಹಿ ಗುಟ್ಟನ್ನು  ನನ್ನ ಪಿಸುಮಾತು ನಿನಗೆಂದೇ ತಂದಿದೆ
ಹಿಂದೆಲ್ಲ ಸಂಜೆ ನೀ ಬರುವ ಮುಂಚೆ ಕಾದಿದ್ದು ನಿನಗಾಗಿಯೇ
ನಿನ್ನ ಮೈ ಸೋಕಿ ಬರುವ ತಂಗಾಳಿ ಹೇಳಿದ್ದು ಈ ಮಾತನೆ

ತಪ್ಪು ಮಾಡಿದ್ದು ಈ ನನ್ನ ಕಣ್ಣು ಎದುರಿದ್ದ ನಿನ್ನ ನೋಡದೆ
ಮತ್ತೊಂದು ತಪ್ಪು ಮಾಡಿದೆ ಆ ಕಣ್ಣು  ಎಲ್ಲೆಲ್ಲು ನಿನ್ನ ಹುಡುಕಿದೆ
ನೀ ಬರುವ ಮುಂಚೆ ಈ ತಂಪು ತಂಗಾಳಿ ಯಾಕಿಷ್ಟು ಬೀಸಿದೆ
ಎಷ್ಟೊಂದು ಒಲವು ಹುಚ್ಚು  ಈ ಹೃದಯ ನಿಂತು ನಿನ್ನ ಕಾದಿದೆ

ಮಳೆಯ ಹನಿಯೊಂದು ತಾನೇ ಮೊದಲೆಂದು ನನ್ನ ಬಳಿ ಬಂದಿದೆ
ಬೆಂದ ಈ ಒಡಲು ನೀನೆ ಬೇಕೆಂದು ಸರಿ ದೂರ ಸರಿದಿದೆ
ಯಾಕಿಷ್ಟು ಹೊತ್ತು ಬೇರೇನೂ ಬೇಡ ನೀನಿಲ್ಲಿ ಬರಬೇಕಿದೆ
ಬಿಗಿದಪ್ಪಿ ನಿನ್ನ ಮರಳದ ಹಾಗೆ ನನ್ನಲೇ ಹಿಡಿದಿದಬೇಕಿದೆ

Wednesday 11 August, 2010

ಸಾರ್ಥಕತೆ

ಕವನದ ಹಂಗೇಕೆ ನನಗೆ
ಬರೆವ ಪ್ರತಿ ಪದವು ನಿನ್ನ
ಸೇರುತಿರಲು..

ಹಾಳೆ ತುಂಬವ ಗೋಜೇಕೆ ಎನಗೆ
ಎರಡಕ್ಷರದಲ್ಲೇ ಭಾವವೆಲ್ಲ
ಬಸಿದಿರಲು..

ಹಾಡು ಹಾಡುವ ತವಕವೇಕೆ ಈಗ
ನಿನ್ನುಸಿರೆ ನನ್ನೆದೆಯಲ್ಲಿ
ರಾಗವಾಗಿರಲು..

ವಿರಹದ ನೋವೇಕೆ ನೆನಪಿಗೆ  
ಮನದಲ್ಲಿ ಅನುರಾಗವೇ
ತುಂಬಿರಲು..  

Friday 6 August, 2010

ನಿನಗಾಗಿ

ನಿನ್ನ ನೋಡುವ ಕಾತರತೆಯೊಂದಿಗೆ ಹೊರಟಿರುವೆ ನಾನು..
ಬೇಗ ಮುಗಿಸಿಕೊ ನಿನ್ನ ನಿತ್ಯದ ಜಂಜಡಗಳನ್ನು
ಮೋಡದೊಡಲೊಳಗಿನ ಹನಿಗಳನೆಲ್ಲ ಹಿಂದಿಕ್ಕಿ ಬರುತಿದೆ ಬಿಂದುವೊಂದು
ಭೂಮಿ ಕೂಡ ಸಜ್ಜಾಗಿದೆ ಸಿಂಧುವಾಗಲೆಂದು..         

Friday 16 July, 2010

ಅಸ್ಪಷ್ಟ

ಸುಳಿವೇ ಇಲ್ಲದೆ ಕಾಡುವ ಮರೆತ ರಾಗದಂತೆ..
ಮೋಡವೇ ಇಲ್ಲದೆ ಸುರಿವ ಮಳೆಯ ಹನಿಯಂತೆ..
ದಾಟಿದಷ್ಟು ಬೆಳೆವ ಕಡಲ ಹರವಿನಂತೆ...
ಮರೆಮಾಡಿದಷ್ಟು ಇಣುಕುವ ಮೊದಲ ಪ್ರೇಮಿಯ ಕುಡಿನೋಟದಂತೆ..

ಭಾವದ ಭಾರ.

Saturday 19 June, 2010

ಉತ್ತರವಿಲ್ಲದ ಪ್ರಶ್ನೆ

ದಕ್ಕದೇ ಕಳೆದು ಹೋದ ಇವಿಷ್ಟು ದಿನಗಳಲ್ಲಿ
ಬದುಕೆಂಬ ಬಂಡಿ ಅಲೆದದ್ದು ಎಲ್ಲೆಲ್ಲಿ
ನಡೆದದ್ದಾಯ್ತು ಅದರ ಸಾಹೇಬನ ಅಂಕೆಯಲ್ಲಿ
ಸೋತ ನಂತರ ಮೀರಬೇಕೆಂಬ ಪ್ರಯತ್ನದಲ್ಲಿ

ಮೂಡುತ್ತಿತ್ತು ಹಲವು ಕನಸು ಮನದಲ್ಲಿ
ವಾಸ್ತವ ಪ್ರಶ್ನೆಯಾಗಿ ಕೂಡುತ್ತಿತ್ತು ಕಣ್ಣಲ್ಲಿ
ನನಸಲೇ ಬೇಕೆಂಬ ಹಠ ಸರಿಯಿತಲ್ಲಿ    
ಉತ್ತರ ಹುಡುಕಲೇ ಬೇಕಾದ ಅನಿವಾರ್ಯದಲ್ಲಿ

ಇಂತಹ ಆತ್ಮ ಹತ್ಯೆಗಳಿಗೆ ಕೊನೆಯಲ್ಲಿ ?

Thursday 18 February, 2010

ವಿರಹ

ಎಲ್ಲಿರುವೆ ಎನ್ನ ಮನದನ್ನೆ
ಸಾಕಿನ್ನು ಹುಡುಗಾಟ
ಬಂದುಬಿಡು ಕಣ್ಮುಂದೆ.

ಕನಸು ಕಣ್ಣಿಣಲ್ಲಿ ಉಳಿಯಲಾರದೆ
ನಿದ್ದೆಯನ್ನು ಸರಿ ದೂರ ಓಡಿಸಿದೆ
ಬೆಳದಿಂಗಳು ನೋಡಿ ನಗುತಿದೆ

ಕವಿತೆಯು ತಾನೆ ಜ್ವರವಾಗಿದೆ
ಕವಿ ಮನಸು ಜಡವಾಗಿದೆ
ನೀನಿಲ್ಲದೆ ಭಾವಗೀತೆಯು ಭಾರವಾಗಿದೆ

ನನ್ನ ಮನವು ನನ್ನೆ ಕೆಣಕುತಿದೆ
ಕವನ ಮುನಿಸಿಕೊಂಡಿದೆ
ವಿರಹದ ತಾಪವೇರುತಿದೆ

ಇನ್ನು ಸಹಿಸಲಾರೆ ದೂರ
ಬಂದೆನ್ನ ಬಂಧಿಸು
ನಿನ್ನ ಬಿಸಿಯಪ್ಪುಗೆಯಲ್ಲಿ

ಮೋಡಮುಸುಕಿದ ಮನದಲ್ಲಿ
ಭಾವ ಸುರಿವಮಳೆಯಾಗಲಿ
ಕವನ ಮೊಳೆತು ಒಲವು ಅರಳಲಿ