Tuesday 28 July, 2009

ಅಗಲಿಕೆ

ಪ್ರೇಮದ ಸಾಕ್ಷಾತ್ಕಾರದ ಸಾಕ್ಷಿಗೆ
ಎಷ್ಟೋ ಮಧುರ ನೆನಪುಗಳನ್ನು
ಜೀವಂತವಾಗಿ ಉಳಿಸಿರುವ ನಿನ್ನ ಪ್ರೀತಿಗೆ
ಗ್ರಹಣದಂತೆ ಕಾಡುವ ಈ ಅಗಲಿಕೆಯ
ಮೋಡದ ತೆರೆಯೇಕೆ?
ನಿನ್ನ ಕುಡಿನೋಟದ ನಿರೀಕ್ಷೆಯಲ್ಲಿ
ಕ್ಷಣಗಳನ್ನು ದಿನಗಳಂತೆ ಕಳೆಯುತ್ತಿರುವಾಗ
ಹೃದಯದ ತಳಮಳ ಈಗಷ್ಟೇ ತಿಳಿದಂತೆ
ಥಟ್ಟನೆ ತಿರುಗಿ ನೋಡಿ ಹೂನಗೆಯನ್ನು
ಬೀರಿದ ಆ ಕ್ಷಣದ ಮಧುರತೆಯ ನೆನಪು
ಮನದಲ್ಲಿ ಮೂಡುತ್ತಿರುವಾಗಲೇ
ನಿನ್ನ ಅಗಲಿಕೆಯ ಸತ್ಯ ಒಡಲೊಳಗಿನಿಂದ
ಹುಟ್ಟಿ ಕಣ್ಣೀರಾಗಿ ಹರಿಯುವುದೇಕೆ?

ಸಿಹಿ ನೆನಪು ಹೋಗಲಿ, ನಿನ್ನ ಕುರಿತಾದ
ನೋವಾದರೂ ನನ್ನೂಳಗಿರಬಾರದೇ
ಶಾಶ್ವತವಾಗಿ??

Tuesday 19 May, 2009

ಹನಿ

ಎಲ್ಲೋ ಯಾವಾಗಲೋ ಶುಭ್ರ ಆಕಾಶದಲ್ಲಿ ಮೋಡದ ಮಧ್ಯದಿಂದ ಜಾರೋ ಒಂದು ಹನಿ, ಪ್ರೇಮಿಯ ಆಗಮನದ ನಿರೀಕ್ಷೆಯಲ್ಲಿ ಇರೋ ಪ್ರಿಯಕರನ ಹಣೆ ಮೇಲೆ ಬೀಳೋ ಹಾಗೆ ಅಪರೂಪಕ್ಕಾದ್ರು ಒಮ್ಮೆ ನನ್ನ ಕಡೆ ನೋಡು.. ಯಾಕಂದ್ರೆ ಸುರಿದು ನಿಂತು ಹೋಗು ಮುಂಗಾರುಮಳೆಗಿಂತ ಈ ಹನೀನೆ ತುಂಬಾ ಮುದ ನೀಡೋದು..

Sunday 17 May, 2009

ಒಂದು ರಚ್ಚೆ ಹಿಡಿದ ಮಳೆಯ ರಾತ್ರಿ..

ಇವತ್ತು ಜೋರು ಮಳೆ.. ಗುಡುಗು ಸಿಡಿಲು... ಎಲ್ಲ ತುಂಬಾ ಆರ್ಭಟ... ನಿನ್ನ ನೆನಪಿನಂತೆ.. ತುಂಬಾ ತೀವ್ರ.. ಮೋಡದ ಜೊತೆ ಸ್ಪರ್ಧೆಗೆ ಇಳಿದಂತೆ ನನ್ನ ಕಣ್ಣು ಮಳೆಗಿಂತ ರಭಸವಾಗಿ ಸುರಿಸ್ತಿದೆ ಕಣ್ಣೀರು..
ಒಂಟಿಯಾಗಿದ್ದಾಗ, ಅದು ಕತ್ತಲಲ್ಲಿ ಯಾಕೆ ನನ್ನ ಹೀಗೆ ಕಾಡ್ತ್ಯ ನೀನು? ನಿನ್ನ ಮರೆಯೋ ಪ್ರತಿ ಪ್ರಯತ್ನನು ಹೊಸ ಸ್ಮೃತಿಯನ್ನು ನೆನಪು ಮಾಡಿಕೊಟ್ಟ ಹಾಗೆ.. ಪ್ರತಿ ಕಣ್ಣೀರ ಹನೀನು ನಿನ್ನ ಇನ್ನೂ ಎದೆಯಾಳಕ್ಕೆ ನೂಕೋ ಹಾಗೆ.. ಯಾಕೆ ಹೀಗೆಲ್ಲ.. ಅಷ್ಟು ಬೆರೆತೋಗಿದ್ಯ ನನ್ನೊಳಗೆ?

ಅಗಲಿ ಎಷ್ಟು ವರ್ಷ ಆಯಿತು ನೀನು.. ಆದರೂ ಯಾಕೆ ನೆನ್ನೆಯಷ್ಟೇ ಜೊತೆಗಿದ್ದ ಹಾಗೆ, ಇವತ್ತು ಬೆಳೆಗ್ಗೆ ದೂರ ಆದ ಹಾಗೆ.. ಜೊತೆಗೆ ಹಸಿ ಹಸಿ ಕಣ್ಣೇರು ಬೇರೆ... ಬೀಳೋ ಮಳೆ ಅಂದ ಇರೋದು ಅದರ ಒಡಲಲ್ಲಿ.. ಅದು ಹುಟ್ಟೋ ಆಕಾಶದಲ್ಲಿ... ಉಕ್ಕಿಸಿ ಉಕ್ಕಿಸಿ ಅದನ್ನ ಆಚೆ ತಳ್ಳೋ ಮೋಡದಲ್ಲಿ ಅಂದಿದ್ದೆ ಅಲ್ವ.... ವಿರಹದಿಂದ ನೊಂದ ಪ್ರೇಮಿಯ ಕಣ್ಣೀರೂ ಅಷ್ಟೇ ಅಲ್ವ.. ನೀರು ಕಣ್ಣಿಂದ ಸುರಿಯುತ್ತೆ ಅನ್ಸೋದೆ ಇಲ್ಲ...ಹೊಟ್ಟೆ ಎಲ್ಲ ತಿರುಚಿ ಅದರ ಮೂಲದಿಂದ ಉಕ್ಕಿ ಹರಿಯುತ್ತಲ್ವ.. ಕಡೆಗೆ ಮಳೆ ನಿಂತ ಹಾಗೆ ನಿಲ್ಲುತ್ತೆ.... ಮಳೆಯಲ್ಲಿ ನೆಂದ ಭೂಮಿ ಹೇಗೆ ಪ್ರಶಾಂತವಾಗುತ್ತೋ ಹಾಗೆ ಮನಸು ಸಹ ತೃಪ್ತಿಯಾಗಿ ಮತ್ತೊಂದು ಮಳೆಗೆ ಸಜ್ಜಾಗುತ್ತೆ... ಇದು ನಿರಂತರ... ಪ್ರಾಕೃತ..

ಯಾಕಿಂದು ನೀನು ಇಷ್ಟು ನೆನಪಾದೆ? ಮಳೆ ಅಂದ್ರೆ ನಿಂಗೆ ಇಷ್ಟ ಅಂತ ನಂಗೆ ಯಾಕೆ ಹೇಳಿದ್ದೆ? ಪ್ರತಿ ಬಾರಿ ಮಳೆ ಬಂದಾಗಲು ಮನಸು ನಿನ್ನಲ್ಲಿಗೆ ಓಡಿ ಬರಲಿ ಅನ್ನೋ ಸ್ವಾರ್ಥಕ್ಕ? ಅಥವಾ ನಾನು ನಿನ್ನ ಮರ್ತಿದ್ರೆ ಮಳೆ ನಿನ್ನ ನೆನಪಿಸಲಿ ಅನ್ನೋ ದುರಾಲೋಚನೇನ? ಮರೆಯೋದಾದ್ರು ಹೇಗೆ ನಿನ್ನ... ಮಳೆ ಬಂದು ನೆನಪಿಸೋಕೆ... ಆ ಭೂಮಿಗಾದ್ರು ಸೂರ್ಯ ಇದಾನೆ.. ಒಣಗಿಸಿ ಮಳೆಯ ಕುರುಹು ಇಲ್ಲದ ಹಾಗೆ ಮಾಡಕ್ಕೆ... ಆದ್ರೆ ನನ್ನ ಸೂರ್ಯ , ಬೆಳಕು ಎಲ್ಲ ಆಗಿದ್ದ ನೀನೆ ಇಲ್ಲ ಈಗ.. ಇನ್ನು ಮಳೆಯನ್ನು ಮರೆಯೋದು ಹೇಗೆ?

ಮತ್ತೆ ಮಳೆ ಹಾಗೆ ಬರ್ತೀಯ ನನ್ನ ಜೀವನಕ್ಕೆ... ನೀನಿಲ್ಲದೆ ಅದು ಬರಡಾಗಿದೆ...ನಿನ್ನ ಪ್ರೀತಿಯನ್ನು ಸುರಿಸಿ ಅದನ್ನು ಮತ್ತೆ ಚಿಗುರಿಸ್ತ್ಯ?

ನಿನ್ನ ನೆಂದ ಕೂದಲಿನ ತುದಿಯಿಂದ ತೊಟ್ಟಿಕ್ಕುವ ಆ ನೀರ ಹನಿಯನ್ನು ನೋಡದೇನೆ ನನ್ನ ಕಣ್ಣು ಹನಿಸುವುದನ್ನು ನಿಲ್ಲಿಸಿಬಿಡುತ್ತೇನೋ ಅನ್ನೋ ತುಮುಲದೊಂದಿಗೆ ಬದುಕಿರುವ
ನಿನ್ನವನು.

Saturday 16 May, 2009

ಮೊದಲ ಕವನ "ಕೋರಿಕೆ"

ಬದುಕು ಬೇಸರವಾಗಿ ನೆನಪು ನೀರಸವಾಗಿ
ಕನಸು ಕಣ್ಣಿನಿಂದ ಮರೆಯಾಗಿ
ನೋವೇ ಜೀವನದ ಒಡನಾಡಿಯಾಗಿರಲು
ನೀ ಬಂದೆ ಸ್ಪೂರ್ತಿಯ ಸೆಲೆಯಾಗಿ
ಬೇಸರವ ಕಳೆದು ನೀರಸವ ನೀಗಿಸಿ
ತೆರೆದ ಕಣ್ಣೊಳಗೆ ಕನಸಾಗಿ

ಕನಸಲ್ಲೇ ಜೊತೆಯಾಗಿ ಕನಸಲ್ಲೇ ಹಿತವಾಗಿ
ಕನಸಲ್ಲೇ ಮರೆಯಾಗಿ ಕನಸನ್ನೇ ಮರೆಮಾಡಿದೆ
ಕನಸಿನ ಲೋಕದಿಂದ ವಾಸ್ತವತೆಗೆ ಎಳೆತಂದೆ
ವಾಸ್ತವದಲ್ಲಿ ಮತ್ತೆ ಆ ಕನಸಿಗೆ
ಕನಸಿನೊಳಗಿನ ನಿನ್ನ ಸಾಮಿಪ್ಯಕ್ಕೆ
ಹಾತೊರೆದು ಕಾಯುವಂತೆ ಮಾಡಿದೆ

ಕಾದು ಕಾದು ಬೇಸತ್ತು ಕಾಯುವುದು ನಿರರ್ಥಕವೆನಿಸಿ
ಕಾಯುವ ಶಕ್ತಿಯನ್ನು ಕಳೆದುಕೊಳ್ಳಲು, ಆಗ ಎದುರಾದೆ!
ಜೀವನದಲ್ಲಿ ಮತ್ತೊಮ್ಮೆ ಆಸೆಯ ಅಲೆಯೆಬ್ಬಿಸಿ
ದುಃಖದ ಕಡಲಾಚೆಗೆ ಸೇರುವ ಚೈತನ್ಯವ ನೀಡಿ
ಸಂತಸದ ಆಶಾಕಿರಣವ ಹೊತ್ತಿಸಿದೆ
ಮತ್ತೆ ಮರೆಯಾಗದಿರು ಕನಸಿನ ಹಾಗೆ
ಶಾಶ್ವತವಾಗಿರಿಸು
ನಿನ್ನ ನೆನಪಿನ
ಸವಿಯನ್ನು..

Friday 15 May, 2009

ಬಯಕೆ

ಎದೆಯಾಳದಲ್ಲಿ ಮೂಡುವ ಪ್ರತಿಯೊಂದು

ಭಾವನೆಯ ಸ್ಪೂರ್ತಿ ನೀನೆ ಆಗಿರಲು

ಇನ್ನೇನು ಬಯಸುವುದು ಈ ಮನ?

ನಿನ್ನ ಸನಿಹವನಲ್ಲದೆ...

Sunday 10 May, 2009

ತುಡಿತ

"ಪ್ರತಿ ದಿನ, ಪ್ರತಿ ಕ್ಷಣ
ಹೊಸ ಕನಸು, ಹೊಸ ನಿರೀಕ್ಷೆ,
ಅದರ ಬೆನ್ನತ್ತಿ ಹೊರಡುವ ಹುಚ್ಚು ಮನಸು...
ಈ ನಾಗಲೋಟದಲ್ಲಿ ಕಳೆದು ಹೋದ ಕ್ಷಣಗಳೆಷ್ಟೋ..
ಕೈ ಬಿಟ್ಟ ಕನಸುಗಳೆಷ್ಟೋ..
ಲೆಕ್ಕವೆಲ್ಲಿ??"