Saturday 16 May, 2009

ಮೊದಲ ಕವನ "ಕೋರಿಕೆ"

ಬದುಕು ಬೇಸರವಾಗಿ ನೆನಪು ನೀರಸವಾಗಿ
ಕನಸು ಕಣ್ಣಿನಿಂದ ಮರೆಯಾಗಿ
ನೋವೇ ಜೀವನದ ಒಡನಾಡಿಯಾಗಿರಲು
ನೀ ಬಂದೆ ಸ್ಪೂರ್ತಿಯ ಸೆಲೆಯಾಗಿ
ಬೇಸರವ ಕಳೆದು ನೀರಸವ ನೀಗಿಸಿ
ತೆರೆದ ಕಣ್ಣೊಳಗೆ ಕನಸಾಗಿ

ಕನಸಲ್ಲೇ ಜೊತೆಯಾಗಿ ಕನಸಲ್ಲೇ ಹಿತವಾಗಿ
ಕನಸಲ್ಲೇ ಮರೆಯಾಗಿ ಕನಸನ್ನೇ ಮರೆಮಾಡಿದೆ
ಕನಸಿನ ಲೋಕದಿಂದ ವಾಸ್ತವತೆಗೆ ಎಳೆತಂದೆ
ವಾಸ್ತವದಲ್ಲಿ ಮತ್ತೆ ಆ ಕನಸಿಗೆ
ಕನಸಿನೊಳಗಿನ ನಿನ್ನ ಸಾಮಿಪ್ಯಕ್ಕೆ
ಹಾತೊರೆದು ಕಾಯುವಂತೆ ಮಾಡಿದೆ

ಕಾದು ಕಾದು ಬೇಸತ್ತು ಕಾಯುವುದು ನಿರರ್ಥಕವೆನಿಸಿ
ಕಾಯುವ ಶಕ್ತಿಯನ್ನು ಕಳೆದುಕೊಳ್ಳಲು, ಆಗ ಎದುರಾದೆ!
ಜೀವನದಲ್ಲಿ ಮತ್ತೊಮ್ಮೆ ಆಸೆಯ ಅಲೆಯೆಬ್ಬಿಸಿ
ದುಃಖದ ಕಡಲಾಚೆಗೆ ಸೇರುವ ಚೈತನ್ಯವ ನೀಡಿ
ಸಂತಸದ ಆಶಾಕಿರಣವ ಹೊತ್ತಿಸಿದೆ
ಮತ್ತೆ ಮರೆಯಾಗದಿರು ಕನಸಿನ ಹಾಗೆ
ಶಾಶ್ವತವಾಗಿರಿಸು
ನಿನ್ನ ನೆನಪಿನ
ಸವಿಯನ್ನು..