Thursday, 26 August 2010

ನಿರೀಕ್ಷೆ

ಈ ಸಣ್ಣ ಘಳಿಗೇಲಿ ನಾ ಕಂಡ ಕನಸಲ್ಲಿ ಅರಳಿದ್ದು ನಿನ್ನಾನಗೆಯೇ 
ಈ ಸಿಹಿ ಗುಟ್ಟನ್ನು  ನನ್ನ ಪಿಸುಮಾತು ನಿನಗೆಂದೇ ತಂದಿದೆ
ಹಿಂದೆಲ್ಲ ಸಂಜೆ ನೀ ಬರುವ ಮುಂಚೆ ಕಾದಿದ್ದು ನಿನಗಾಗಿಯೇ
ನಿನ್ನ ಮೈ ಸೋಕಿ ಬರುವ ತಂಗಾಳಿ ಹೇಳಿದ್ದು ಈ ಮಾತನೆ

ತಪ್ಪು ಮಾಡಿದ್ದು ಈ ನನ್ನ ಕಣ್ಣು ಎದುರಿದ್ದ ನಿನ್ನ ನೋಡದೆ
ಮತ್ತೊಂದು ತಪ್ಪು ಮಾಡಿದೆ ಆ ಕಣ್ಣು  ಎಲ್ಲೆಲ್ಲು ನಿನ್ನ ಹುಡುಕಿದೆ
ನೀ ಬರುವ ಮುಂಚೆ ಈ ತಂಪು ತಂಗಾಳಿ ಯಾಕಿಷ್ಟು ಬೀಸಿದೆ
ಎಷ್ಟೊಂದು ಒಲವು ಹುಚ್ಚು  ಈ ಹೃದಯ ನಿಂತು ನಿನ್ನ ಕಾದಿದೆ

ಮಳೆಯ ಹನಿಯೊಂದು ತಾನೇ ಮೊದಲೆಂದು ನನ್ನ ಬಳಿ ಬಂದಿದೆ
ಬೆಂದ ಈ ಒಡಲು ನೀನೆ ಬೇಕೆಂದು ಸರಿ ದೂರ ಸರಿದಿದೆ
ಯಾಕಿಷ್ಟು ಹೊತ್ತು ಬೇರೇನೂ ಬೇಡ ನೀನಿಲ್ಲಿ ಬರಬೇಕಿದೆ
ಬಿಗಿದಪ್ಪಿ ನಿನ್ನ ಮರಳದ ಹಾಗೆ ನನ್ನಲೇ ಹಿಡಿದಿದಬೇಕಿದೆ

Wednesday, 11 August 2010

ಸಾರ್ಥಕತೆ

ಕವನದ ಹಂಗೇಕೆ ನನಗೆ
ಬರೆವ ಪ್ರತಿ ಪದವು ನಿನ್ನ
ಸೇರುತಿರಲು..

ಹಾಳೆ ತುಂಬವ ಗೋಜೇಕೆ ಎನಗೆ
ಎರಡಕ್ಷರದಲ್ಲೇ ಭಾವವೆಲ್ಲ
ಬಸಿದಿರಲು..

ಹಾಡು ಹಾಡುವ ತವಕವೇಕೆ ಈಗ
ನಿನ್ನುಸಿರೆ ನನ್ನೆದೆಯಲ್ಲಿ
ರಾಗವಾಗಿರಲು..

ವಿರಹದ ನೋವೇಕೆ ನೆನಪಿಗೆ  
ಮನದಲ್ಲಿ ಅನುರಾಗವೇ
ತುಂಬಿರಲು..  

Friday, 6 August 2010

ನಿನಗಾಗಿ

ನಿನ್ನ ನೋಡುವ ಕಾತರತೆಯೊಂದಿಗೆ ಹೊರಟಿರುವೆ ನಾನು..
ಬೇಗ ಮುಗಿಸಿಕೊ ನಿನ್ನ ನಿತ್ಯದ ಜಂಜಡಗಳನ್ನು
ಮೋಡದೊಡಲೊಳಗಿನ ಹನಿಗಳನೆಲ್ಲ ಹಿಂದಿಕ್ಕಿ ಬರುತಿದೆ ಬಿಂದುವೊಂದು
ಭೂಮಿ ಕೂಡ ಸಜ್ಜಾಗಿದೆ ಸಿಂಧುವಾಗಲೆಂದು..