Wednesday, 25 April 2012

ಹೊಸ ತಾಣ

ಎರಡು ವರ್ಷದ ಸೋಮಾರಿತನ ಮತ್ತು ಪರಿಶ್ರಮದ ಫಲದಿಂದ ನನ್ನ ಹೊಸ ವೆಬ್ ಸೈಟ್ ಈಗ ರೆಡಿ ಆಗಿದೆ. ಇಲ್ಲಿನ ಎಲ್ಲ ಹನಿ ಮತ್ತು ಇಬ್ಬನಿಗಳನ್ನು, ನಿಮ್ಮ ಪ್ರತಿಕ್ರಿಯೆಯೊಂದಿಗೆ ಹೊಸ ತಾಣಕ್ಕೆ ಸಾಗಿಸಿದ್ದೇನೆ. ಇನ್ನು ನಮ್ಮ ಮುಂದಿನ ಭೇಟಿಗಳೆಲ್ಲವೂ ಅಲ್ಲೇ ನಡೆಯಲಿದೆ..
ದಯವಿಟ್ಟು ಹೊಸ ತಾಣಕ್ಕೆ ಬನ್ನಿ ಮತ್ತು ಹೇಗಿದೆ ಎಂಬುದನ್ನು ತಿಳಿಸಿ..
http://suvihas.com

ನಿಮಗಾಗಿ ಎದುರು ನೋಡುತ್ತಿರುತ್ತೇನೆ..
ಪ್ರೀತಿಯಿಂದ, ಸುಹಾಸ್.  

Tuesday, 27 March 2012

ಯುಗಾದಿ

   
ಹಳೆಯ ಕೊಳೆಯ ಹೊಸತು ತೊಳೆಯಲಿ
ಹೊಸದೇ ಕಳೆಯ ಹೊಸತು ಮೆರೆಯಲಿ
ಸವಿಯ ಬಾಳಿಗೆ ಹೊಸತು ಸುರಿಯಲಿ
ಅನಂತ ಯುಗಾದಿಗಳ ಯಾನ ಹರಸಲಿ

Sunday, 19 February 2012

ಭವ್ಯ

ನೆನಪುಗಳ ಹುಡುಕಾಟವೇಕೆ ದಿಗಂತದ ಮಡಿಲಲ್ಲಿ
ಮರೆಸುತಿರುವ ಸೃಷ್ಟಿಯ ಸೊಬಗಿರುವಾಗ ಕಣ್ಣೆದುರಲ್ಲಿ
ಕಾಡುವ ಭವಿಷ್ಯದ ಕನಸಿಗೆ ಕೊನೆಯೆಂಬುದು ಇಲ್ಲಿ
ಕ್ಷಣಕ್ಕಾದರು ಕಲ್ಪನೆ ಉತ್ತುಂಗಕ್ಕೇರಲಿ, ಬದುಕು ಪ್ರಜ್ವಲಿಸಲಿ. 

Monday, 14 February 2011

ಪ್ರೇಮಿಗಳಿಗೆ

ಕಣ್ಣಲ್ಲಿ ಕಲೆತು
ನೋಟದಲ್ಲಿ ಬೆರೆವ
ಆ ಜೋಡಿಯ ಜೋಡಿ ಕಂಗಳಿಗೆ

ಬೆರಳಲ್ಲಿ ಬೆಸೆದು
ಸ್ಪರ್ಶದಿ ಪುಳಕಿಸುವ
ಆ ಜೋಡಿಯ ಜೋಡಿ ಕೈಗಳಿಗೆ

ಕನಸನ್ನು ಸವಿದು
ನನಸಲ್ಲಿ ನೆನೆವ
ಆ ಜೋಡಿಯ ತೀರದ ವಿರಹಕೆ 

ಚುಂಬನದಲ್ಲಿ ಕರಗಿ
ಅಪ್ಪುಗೆಯಲಿ ಮುದಗೊಳ್ಳುವ
ಆ ಜೋಡಿಯ ತನ್ಮಯ ಭಾವಸಿರಿಗೆ

                    ಒಲುಮೆಯ  ದಿನದ ಶುಭಾಶಯಗಳು

Thursday, 4 November 2010

ದೀಪ

ಹಚ್ಚುವ ಪ್ರತಿ ದೀಪವು
      ಬೆಳಗಲಿ ಬದುಕನ್ನು
ಬೆಳಕಿನ ಪ್ರತಿ ಕಣವು
      ಹೊಡೆದೋಡಿಸಲಿ ಅಂಧಕಾರವನ್ನು

ಜ್ಯೋತಿಯ ಪ್ರಖರತೆ ಮೂಡಿಸಲಿ
      ಒಳಿತಿನ ನಂಬುಗೆಯನ್ನು
ಕುಡಿಯ ನಿಶ್ಚಲತೆ ತುಂಬಲಿ
       ದೃಡ ಆತ್ಮವಿಶ್ವಾಸವನ್ನು

ಆರತಿಯ ಸಂಭ್ರಮವು ಹರಡಲಿ
       ಪ್ರೀತಿ ವಿಶ್ವಾಸವನ್ನು
ನಂದಾದೀಪವು ಶಾಶ್ವತಗೊಳಿಸಲಿ
      ಬದುಕಿನ ಭವ್ಯತೆಯನ್ನು

Thursday, 26 August 2010

ನಿರೀಕ್ಷೆ

ಈ ಸಣ್ಣ ಘಳಿಗೇಲಿ ನಾ ಕಂಡ ಕನಸಲ್ಲಿ ಅರಳಿದ್ದು ನಿನ್ನಾನಗೆಯೇ 
ಈ ಸಿಹಿ ಗುಟ್ಟನ್ನು  ನನ್ನ ಪಿಸುಮಾತು ನಿನಗೆಂದೇ ತಂದಿದೆ
ಹಿಂದೆಲ್ಲ ಸಂಜೆ ನೀ ಬರುವ ಮುಂಚೆ ಕಾದಿದ್ದು ನಿನಗಾಗಿಯೇ
ನಿನ್ನ ಮೈ ಸೋಕಿ ಬರುವ ತಂಗಾಳಿ ಹೇಳಿದ್ದು ಈ ಮಾತನೆ

ತಪ್ಪು ಮಾಡಿದ್ದು ಈ ನನ್ನ ಕಣ್ಣು ಎದುರಿದ್ದ ನಿನ್ನ ನೋಡದೆ
ಮತ್ತೊಂದು ತಪ್ಪು ಮಾಡಿದೆ ಆ ಕಣ್ಣು  ಎಲ್ಲೆಲ್ಲು ನಿನ್ನ ಹುಡುಕಿದೆ
ನೀ ಬರುವ ಮುಂಚೆ ಈ ತಂಪು ತಂಗಾಳಿ ಯಾಕಿಷ್ಟು ಬೀಸಿದೆ
ಎಷ್ಟೊಂದು ಒಲವು ಹುಚ್ಚು  ಈ ಹೃದಯ ನಿಂತು ನಿನ್ನ ಕಾದಿದೆ

ಮಳೆಯ ಹನಿಯೊಂದು ತಾನೇ ಮೊದಲೆಂದು ನನ್ನ ಬಳಿ ಬಂದಿದೆ
ಬೆಂದ ಈ ಒಡಲು ನೀನೆ ಬೇಕೆಂದು ಸರಿ ದೂರ ಸರಿದಿದೆ
ಯಾಕಿಷ್ಟು ಹೊತ್ತು ಬೇರೇನೂ ಬೇಡ ನೀನಿಲ್ಲಿ ಬರಬೇಕಿದೆ
ಬಿಗಿದಪ್ಪಿ ನಿನ್ನ ಮರಳದ ಹಾಗೆ ನನ್ನಲೇ ಹಿಡಿದಿದಬೇಕಿದೆ

Wednesday, 11 August 2010

ಸಾರ್ಥಕತೆ

ಕವನದ ಹಂಗೇಕೆ ನನಗೆ
ಬರೆವ ಪ್ರತಿ ಪದವು ನಿನ್ನ
ಸೇರುತಿರಲು..

ಹಾಳೆ ತುಂಬವ ಗೋಜೇಕೆ ಎನಗೆ
ಎರಡಕ್ಷರದಲ್ಲೇ ಭಾವವೆಲ್ಲ
ಬಸಿದಿರಲು..

ಹಾಡು ಹಾಡುವ ತವಕವೇಕೆ ಈಗ
ನಿನ್ನುಸಿರೆ ನನ್ನೆದೆಯಲ್ಲಿ
ರಾಗವಾಗಿರಲು..

ವಿರಹದ ನೋವೇಕೆ ನೆನಪಿಗೆ  
ಮನದಲ್ಲಿ ಅನುರಾಗವೇ
ತುಂಬಿರಲು..